ಕ್ಲೈನೋಸ್ಟ್ಯಾಟ್		

	ಸಸ್ಯಾಂಗಗಳ ಚಲನೆಗೂ ಗುರುತ್ವಾಕರ್ಷಣಕ್ಕೂ ಇರುವ ಸಂಬಂಧವನ್ನು ವಿವರಿಸಲು ಉಪಯೋಗಿಸುವ ಒಂದು ಉಪಕರಣ. ಉದಾಹರಣೆಗೆ ಸಸ್ಯಾಂಗಗಳ ಬೆಳೆವಣಿಗೆಯ ದಿಕ್ಕನ್ನು ಗುರುತ್ವಾಕರ್ಷಣೆ ನಿರ್ಧರಿಸುತ್ತದೆ. ಪ್ರಥಮ ಬೇರು ಯಾವಾಗಲೂ ನೆಲದೆಡೆಗೆ ಬಾಗಿ ಬೆಳೆಯುತ್ತದೆ. ಇದಕ್ಕೆ ಗುರುತ್ವ ಪ್ರೇರಿತಚಲನೆ (ಜಿಯೋಟ್ರೋಪಿಸಂ) ಎಂದು ಹೆಸರು. ಹಾಗೆಯೇ ಪ್ರಥಮಕಾಂಡ ಭೂಮಿಗೆ ವಿಮುಖವಾಗಿ (ಊಧ್ರ್ವ ಮುಖ) ಬೆಳೆಯುತ್ತದೆ. ಈ ತೆರನ ಬೆಳೆವಣಿಗೆಗೆ ಆಯಾ ಭಾಗಗಳಲ್ಲಿ ಪ್ರಚೋದಕ ರಾಸಾಯನಿಕ ಮತ್ತು ಆಕ್ಸಿನ್ ಉತ್ಪತ್ತಿಯಾಗುವುದೇ ಕಾರಣ. ಗುರುತ್ವ ಪ್ರೇರಿತಚಲನೆ ಎಲ್ಲ ಸಸ್ಯಗಳಲ್ಲೂ ಕಂಡುಬರುತ್ತದೆ. ಒಂದು ಗಿಡವನ್ನು ಭೂಮಿಗೆ ಸಮಾಂತರವಾಗಿ ಇಟ್ಟು ಬೆಳೆಸಿದರೆ ಬೇರಿನ ತುದಿ ಅಧೋಮುಖವಾಗಿ ಭೂಮಿಯ ಕಡೆಗೂ ಕಾಂಡದ ತುದಿ ಊಧ್ರ್ವ ಅಥವಾ ಮೇಲ್ಮುಖವಾಗಿ ಭೂಮಿಗೆ ವಿಮುಖವಾಗಿಯೂ ಬಾಗಿ ಬೆಳೆಯುತ್ತವೆ. ಈ ಬಗೆಯ ಬೆಳೆವಣಿಗೆಯನ್ನು ಪ್ರಾಯೋಗಿಕವಾಗಿ ವಿವರಿಸಲು ಕ್ಲೈನೋಸ್ಟ್ಯಾಟನ್ನು ಉಪಯೋಗಿಸುತ್ತಾರೆ. ಇದರಲ್ಲಿ ಒಂದು ಕೇಂದ್ರಬಿಂದುವಿನ ಸುತ್ತಲೂ ಗಡಿಯಾರದ ಮಾದರಿಯಲ್ಲಿ ಸುತ್ತುವ ಒಂದು ಚಕ್ರಉಂಟು. ಚಕ್ರದ ಒಂದು ಕಡೆ ಸರಳು ಇದ್ದು ಅದರ ಒಂದು ತುದಿ ಬಟ್ಟಲಿನಂತಿದೆ. ಇದರಲ್ಲಿ ಕುಂಡದಲ್ಲಿ ಬೆಳೆಯುತ್ತಿರುವ ಸಸ್ಯವನ್ನು ಕುಂಡದ ಸಮೇತ ಅಳವಡಿಸಿ ಸಸ್ಯಭೂಮಿಗೆ ಸಮಾಂತರವಾಗಿರುವಂತೆ ಇಡುತ್ತಾರೆ. ಕ್ಲೈನೋಸ್ಟ್ಯಾಟಿನ ಚಕ್ರ ಗಂಟೆಗೆ 1-4 ಸುತ್ತು ತಿರುಗುತ್ತದೆ. ಚಕ್ರ ಸುತ್ತುತ್ತಿರುವಂತೆ ಸಸ್ಯವೂ ತನ್ನ ಅಕ್ಷದ ಮೇಲೆ ಸುತ್ತುತ್ತಲೇ ಇರುತ್ತದೆ. ಹೀಗೆ ಸುತ್ತುತ್ತಿರುವಾಗ ಬೆಳೆಯುತ್ತಿರುವ ಸಸ್ಯದ ಎಲ್ಲ ಭಾಗಗಳೂ ಗುರುತ್ವಾಕರ್ಷಣೆಗೆ ಸಮವಾಗಿ ಗುರಿಯಾಗುತ್ತವೆ. ಇದರಿಂದ ಗಿಡದಕಾಂಡ ಹಾಗೂ ಬೇರು ಭೂಮಿಗೆ ಸಮಾಂತರವಾಗಿಯೇ ಬೆಳೆಯುತ್ತದೆ. ಬೇರು ಭೂಮಿಯ ಕಡೆ ಬಾಗಿ ಬೆಳೆಯುವುದಿಲ್ಲ. ಕ್ಲೈನೋಸ್ಟ್ಯಾಟಿನ ಚಲನೆಯನ್ನು ನಿಲ್ಲಿಸಬಹುದು. ಹೀಗೆ ನಿಲ್ಲಿಸಿದಾಗ ಸಸ್ಯದ ಕಾಂಡವೂ ಬೇರೂ ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಮತ್ತೆ ಒಳಗಾಗಿ ತಮಗೆ ವಿಶಿಷ್ಟವಾದ ಬಾಗು ಚಲನೆಯನ್ನು ಪ್ರದರ್ಶಿಸುತ್ತವೆ.                          					(ಬಿ.ಪಿ.)